ರೋಗನಿದಾನವಿಜ್ಞಾನ  -  ದೇಹದ ಅಥವಾ ಮನಸ್ಸಿನ ಅಸ್ವಸ್ಥ ಸ್ಥಿತಿಯ ಸ್ವರೂಪ ಅನ್ವೇಷಿಸುವ ವೈದ್ಯವಿಜ್ಞಾನ ವಿಭಾಗ (ಡಯೋ ಗ್ನೋಸ್ಟಿಕ್ಸ್). ರೋಗಗಳ ಪ್ರಾರಂಭ ಮತ್ತು ಮುಂದುವರಿಕೆ ಬಗ್ಗೆ ವ್ಯಕ್ತಿಗೆ ಅರಿವು ಅತ್ಯಗತ್ಯ. ಪ್ರತಿಯೊಂದು ಕಾಯಿಲೆಯೂ ತನ್ನದೇ ಆದ ವೇಗದಲ್ಲಿ, ರೀತಿಯಲ್ಲಿ ಸಾಗುತ್ತದೆ. ಇದು ಪ್ರತಿ ವ್ಯಕ್ತಿಯಲ್ಲೂ ಕಾಯಿಲೆಗೆ ತಕ್ಕಂತೆ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ಮುಖ್ಯ ಕಾರಣಗಳು: ತಂದೆ ತಾಯಿಯರಿಂದ ಬಂದ ವಂಶವಾಹಿನಿಗಳು, ನಮ್ಮ ಒಳಗಿನ ಮತ್ತು ಹೊರಗಿನ ಪರಿಸರ, ಮಾನಸಿಕ ಸ್ಥಿತಿ, ಚಿಕಿತ್ಸೆಯ ಪರಿಣಾಮ ಇತ್ಯಾದಿ. ಕೆಲವು ರೋಗಗಳು ಭ್ರೂಣಾವಸ್ಥೆಯಲ್ಲೇ ಪ್ರಾರಂಭವಾಗಿ, ಮಗುವಿನ ಜೊತೆಗೇ ಬೆಳೆಯುತ್ತವೆ. ಸೋಂಕುರೋಗಗಳು ಸೂಕ್ಷ್ಮಜೀವಿಗಳಿಂದ ಉಂಟಾಗುವುದರಿಂದ ರೋಗನಿದಾನವೇ ಬೇರೆ ರೀತಿಯದು.  ವಿವಿಧ ಅಂಗೋಪಾಂಗಗಳಿಗೆ ಉಂಟಾಗಿರುವ ಹಾನಿಗೆ ತಕ್ಕಂತೆ ಅವುಗಳ ಕ್ರಿಯೆಗಳಲ್ಲಿ ಬದಲಾವಣೆ ಮಾಡಿ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಕೆಲವು ರೋಗಗಳು ದೇಹದ ಇತರ ಭಾಗಗಳಿಗೆ ಹರಡುವುದರಿಂದ ಕಾಯಿಲೆಯ ಸಂಪೂರ್ಣ ಮಾಹಿತಿ ಅತ್ಯಗತ್ಯ. ನಾನಾ ಕಾರಣಗಳಿಂದ ಜೀವಕೋಶಗಳ ಕಾರ್ಯವೈಖರಿ, ವಿಭಜನಾ ಸಾಮಥ್ರ್ಯಗಳಲ್ಲಿ ವ್ಯತ್ಯಾಸ ಉಂಟಾಗಿರುವುದರಿಂದ, ಅಂಗಾಂಶಗಳು ಹಾನಿಯಾಗಿ ಕಾಯಿಲೆಗಳು ಪ್ರಾರಂಭವಾಗುತ್ತವೆ. ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿಗನುಗುಣವಾಗಿ, ರೋಗದ ತೀವ್ರತೆ ಕಂಡು ಬರುತ್ತದೆ. ಕೆಲವು ರೋಗಗಳು ಒಂದೇ ಭಾಗಕ್ಕೆ ಸಂಬಂಧಿಸಿದ್ದರೆ ಮತ್ತೆ ಕೆಲವು ಹಲವಾರು ಅಂಗೋಪಾಂಗಗಳಿಗೆ ತೊಂದರೆ  ಉಂಟುಮಾಡಬಹುದು. ಒಂದೇ ಕಾಯಿಲೆ ಬೇರೆ ಬೇರೆ ಭಾಗಗಳಲ್ಲಿ ವಿವಿಧ ರೀತಿಯ ತೊಂದರೆಗಳಿಗೆ ಕಾರಣವಾಗಬಹುದು. ಪ್ರತಿ ಕಾಯಿಲೆಗೂ ತನ್ನದೇ ಆದ ರೋಗವೈಶಿಷ್ಟ್ಯ ಇದೆ. ಉದಾಹರಣೆಗೆ, ಅರ್ಬುದರೋಗ ಜೀವಕೋಶಗಳ ವಿಭಜನಾ ಕಾರ್ಯದಲ್ಲಿ ಮಾರ್ಪಾಟು ಮಾಡಿ ಅನಿಯಂತ್ರಿತವಾಗಿ ಬೆಳೆದು ಉಪಯೋಗವಿಲ್ಲದ, ಆ ಭಾಗಕ್ಕೆ ಹಾನಿಮಾಡುವ ಒಂದು ಅಂಗಾಂಶದ ಗಂಟಾಗಿ ಮಾರ್ಪಾಡಾಗುತ್ತದೆ. ಅದರ ಬೆಳೆವಣಿಗೆಗೆ ಸುತ್ತಲಿನ ಆರೋಗ್ಯವಂತ ಅಂಗೋಪಾಂಗಗಳ ಜೀವಕೋಶಗಳೇ ಆಹಾರ. ವೈರಸ್, ಬ್ಯಾಕ್ಟೀರಿಯ, ಬೂಷ್ಟುಗಳ ಸೋಂಕಿನ ಕಥೆಯೂ ಹೀಗೆಯೇ. ಇವುಗಳ ಜೀವನಾಭಿವೃಧ್ದಿಗೆ ಆರೋಗ್ಯವಂತ ಅಂಗಾಂಶಗಳೇ ಬೇಕು. ವಿವಿಧ ಕಾಯಿಲೆಗಳಿಂದ ಹಲವಾರು ರಾಸಾಯನಿಕ ವಸ್ತುಗಳು ಉತ್ಪತ್ತಿಯಾಗಿ, ದೇಹದ ಆಂತರಿಕ ಪರಿಸರದ ಸಮತೋಲದಲ್ಲಿ ವ್ಯತ್ಯಯ ಉಂಟುಮಾಡಿ, ಕ್ರಿಯೆಗಳಲ್ಲಿ ಏರುಪೇರುಂಟಾಗುತ್ತದೆ. ಆದ್ದರಿಂದ ಕಾಯಿಲೆಗೆ ತಕ್ಕಂತೆ, ಅದರ ಹಂತವನ್ನಾಧರಿಸಿ, ಯಾವ ಯಾವ ಅಂಗೋಪಾಂಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎನ್ನುವುದನ್ನು ವಿಶ್ಲೇಷಿಸಿ, ತಕ್ಕ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಇವು ರಕ್ತದಲ್ಲಿಯ ರಕ್ತಕಣಸಂಖ್ಯೆ, ರಾಸಾಯನಿಕ ವಸ್ತುಗಳು (ಸಕ್ಕರೆ, ಜಿಡ್ಡು, ಬಿಲಿರುಬಿನ್, ಯೂರಿಯ, ಕಿಣ್ವಗಳು, ಹಾರ್ಮೋನುಗಳು, ಸಸಾರಜನಕ), ಕ್ರಿಮಿಗಳು, ಮುಂತಾದವುಗಳ ಪರೀಕ್ಷೆ; ಮೂತ್ರದಲ್ಲಿ ರಾಸಾಯನಿಕ ವಸ್ತುಗಳ(ಸಕ್ಕರೆ, ಆಲ್ಬುಮಿನ್ ಸಸಾರಜನಕ) ಪ್ರಮಾಣ, ಅಸಾಧಾರಣ ವಸ್ತುಗಳ ಇರುವಿಕೆ, ಕೆಂಪು ಮತ್ತು ಬಿಳಿ ರಕ್ತಕಣಗಳು, ಬ್ಯಾಕ್ಟೀರಿಯಾಗಳು; ಮಲ, ಕಫ, ವಿವಿಧ ದ್ರವಗಳಲ್ಲಿ ಕ್ರಿಮಿಗಳು, ರಾಸಾಯನಿಕಗಳು;  ಇವುಗಳ ಪರೀಕ್ಷೆಯಿಂದ ರೋಗದ ಕಾರಣ, ಹಂತ, ಬೇರೆ ಬೇರೆ ಭಾಗಗಳಿಗೆ ಆಗಿರುವ ಹಾನಿಯ ಪ್ರಮಾಣ, ಚಿಕಿತ್ಸೆಗೆ ಸಿಕ್ಕಿರುವ ಪ್ರತಿಫಲ ಇತ್ಯಾದಿಯ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಇದರಿಂದ ಚಿಕಿತ್ಸೆಯಲ್ಲಿ ಮಾಡಬೇಕಾದ ಬದಲಾವಣೆ ಗಳು, ಯಾವ ಔಷಧಗಳು ಹೆಚ್ಚು ಪರಿಣಾಮಕಾರಿ ಎಂಬುದನ್ನೂ ನಿರ್ಧರಿಸಬಹುದು. ಕೆಲವೊಮ್ಮೆ ರೋಗದ ಚಿಹ್ನೆಗಳಿಗೂ ಪ್ರಯೋಗಾಲ ಯದ ವರದಿಗೂ ಹೊಂದಾಣಿಕೆ ಆಗದಿರಬಹುದು. ಈ ವ್ಯತ್ಯಾಸಗಳನ್ನು ವೈದ್ಯ ತನ್ನ ವೈದ್ಯಕೀಯ ಜ್ಞಾನ ಮತ್ತು ಪರಿಣತಿಯ ಸಹಾಯದಿಂದ ವಿಶ್ಲೇಷಿಸಿ ನಿರ್ಧಾರ ಕೈಗೊಳ್ಳುತ್ತಾನೆ. ನಮ್ಮ ಸುತ್ತಲಿನ ಪರಿಸರದ(ಗಾಳಿ, ನೀರು, ಆಹಾರ) ಮಾಲಿನ್ಯದಿಂದ ಹಲವಾರು ಕಾಯಿಲೆಗಳು ತಲೆದೋರುತ್ತವೆ. ಆಗ ನಮ್ಮ ಪರೀಕ್ಷೆಯಲ್ಲದೆ, ಆ ಪರಿಸರದ ಬಗ್ಗೆ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಬೇಕಾಗುತ್ತದೆ ಕೂಡ. ಶಸ್ತ್ರಚಿಕಿತ್ಸೆ ಯಾದ ಬಳಿಕ ಮತ್ತು ಆ ಕಾಯಿಲೆಯ ಒಂದು ತುಣುಕನ್ನು ವಿಶೇಷವಾಗಿ ಸಂಶ್ಲೇಷಿಸಿ, ಅಧ್ಯಯನ ಮಾಡಿ ರೋಗದ ಬಗ್ಗೆ ಸರಿಯಾದ ಮಾಹಿತಿ ಪಡೆಯಬಹುದು. ಇದರಿಂದ ಒಂದೇ ರೀತಿ ಕಾಣುವ ಹಲವಾರು ಕಾಯಿಲೆಗಳನ್ನು ಬೇರ್ಪಡಿಸಲು ಸಹಾಯಕಾರಿ. ಈ ರೋಗ ನಿದಾನದ ವಿಜ್ಞಾನದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳು, ಗಣಕ, ಮಾಹಿತಿ ತಂತ್ರವಿದ್ಯೆ, ಅಂತರಜಾಲ ವ್ಯವಸ್ಥೆ ಮುಂತಾದವು ರೋಗದ ಪತ್ತೆ, ಚಿಕಿತ್ಸೆ ಹಾಗೂ ತಡೆಗಟ್ಟುವಿಕೆಯಲ್ಲಿ ಬಹು ಸಹಾಯಕಾರಿ.										
(ಎಸ್.ಎನ್.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ